Sunday, September 9, 2012

ದಾರಿ ತಪ್ಪಿದ ಜನ್ನು - Complete


ಜನ್ನು ಎಂದಿನಂತೆ ಹಾರಾಡಿಕೊಂಡು ಬರುತ್ತಿದ್ದ. ಅವನ ಕೈಗಳೇ ರೆಕ್ಕೆಗಳು. ಅದೋ ದೂರದ ಬೆಟ್ಟು ಗದ್ದೆಯಲ್ಲಿ ಅಪ್ಪನ ತಲೆ ಕಾಣುತ್ತಿದೆ, ತಲೆ ಅಂದರೆ ಈ ಪುಟಾಣಿಗೆ ಕಂಡದ್ದು ತಲೆಗೆ ಸುತ್ತಿದ್ದ ಚಿಕ್ಕ ಬೈರಾಸು. ’ ವ್ಹಾ! ಅಪ್ಪ ನನ್ನ ನೋಡಿದರೆ ಮುಗೀತು ಕಥೆ, ನಿನ್ನೆ ಬೇರೆ ಅವರ ಪೆಟ್ಟಿಗೆ ಮುಟ್ಟಿ " ಮಾಣಿ, ನಿನ್ನ ಚರ್ಮ ಸುಲಿತೀನಿ" ಅಂತ ಬೈಯಿಸಿಕೊಂಡಿದ್ದೂ ಆಗಿದೆ. ’ ಇವರ ಸುದ್ದಿಗೇ ಹೋಗೋದು ಬೇಡಪ್ಪಾ ಅಂದುಕೊಂಡವನು ರೆಂಜೆ ಮರದ ಪಕ್ಕದ ಕಾಲುದಾರಿಯಲ್ಲಿ ಮೆತ್ತಗೆ ಸಾಗಿ ಮಾಯವಾದ.
ತಿಮ್ಮುವಿಗೋ ಇಂದು ಮೈಮುರಿಯುವಷ್ಟು ಕೆಲಸ. ಅಡಿಕೆ ಸಿಪ್ಪೆ ಸುಲಿಯುವಾಗಲೆಲ್ಲಾ ಅವನೂ ಅವನಪ್ಪನೊಡನೆ ಹೋಗಲೇಬೇಕಿತ್ತು. ಅವನ ಮನಸ್ಸೋ ಜನ್ನುವನ್ನೇ ನೆನೆಯುತಿತ್ತು. ಅಂತೂ ಇಂತೂ, ಅಷ್ಟೋ ಇಷ್ಟೋ ಕೆಲಸ ಮುಗಿಸಿದವನು ಅವನಪ್ಪ ವೀಳ್ಯೆದೆಲೆ ತಿನ್ನಲು ಹೊರಟಿದ್ದೇ ತಡ ತಿಮ್ಮು ಅಲ್ಲಿಂದ ಪರಾರಿಯಾದ. ಜನ್ನುವನ್ನು ಎಲ್ಲಾ ಕಡೆ ಹುಡುಕಿ ಕೊನೆಗೆ ಕೆರೆದಂಡೆಯ ಮೇಲಿರುವ ಕಟ್ಟೆಯವರೆಗೆ ಬಂದ. ಜನ್ನು ಅಲ್ಲೂ ಇಲ್ಲ! "ಜನ್ನು, ಏ ಜನ್ನು, ಜನ್ನೂ............." ಅಂತ ಬೊಬ್ಬೆ ಹಾಕಿದ್ದೇ ಬಂತು. ಸಿಳ್ಳೆ ಹಾಕಿ ಮತ್ತೊಂದು ’ ಕೂ....’ ಹಾಕಿದ್ದೂ ಆಯ್ತು. ಜನ್ನುವಿನ ಸುಳಿವೇ ಇಲ್ಲ. ತಿಮ್ಮು ಪ್ರಕಾರ ಅವನ ಬೊಬ್ಬೆ, ಕೂ ಗಳೆಲ್ಲಾ ಕೆರೆ,ಗದ್ದೆ, ಅಂಗಳ ಎಲ್ಲಾ ದಾಟಿ ಜನ್ನುವಿನ ಕಿವಿಗೆ ಬೀಳುತ್ತೆ ಅಂತ, ಆದರೆ ಅದೆಲ್ಲಾ ಒಂದು ಕಿಲೋಮೀಟರ್ ಪರಿಧಿಯಲ್ಲೇ ಉಳಿದಿತ್ತು!!
ಪಾಪದ ಹುಡುಗ, ತನ್ನ ಮಿತ್ರನಿಗೋಸ್ಕರ ಚಡಪಡಿಸಿದ. ’ ಹೋಗಲಿ!, ಇಲ್ಲೇ ಕಾಯ್ತಾ ಕೂತಿರ್ತೀನಿ, ಬರಬಹುದು ಸ್ವಲ್ಪ ತಡ ಆಗಿ, ಆಮೇಲೆ ನಾನಿಲ್ಲಾದ್ರೆ ಅವನಿಗೆ ಬೇಸರವಾಗುತ್ತಲ್ಲಾ’ ಅಂತ ಯೋಚಿಸಿ ಕೆರೆ ಕಟ್ಟೆ ಮೇಲೆ ಕೂತು ಕೈಗೆ ಸಿಕ್ಕಿದ ದಾಸವಾಳದ ಎಲೆಯೊಂದರೊಡನೆ ಆಡತೊಡಗಿದ.
ಇತ್ತ ಜನ್ನು, ಜಿಗಿಯುತ್ತಿರುವ ಹಾತೆಯೊಂದನ್ನು ಹಿಂಬಾಲಿಸಿಕೊಂಡು ಹೊರಟಿದ್ದ. ಆಗಲೇ ಸೂರ್ಯ ಬೇರೆ ಇಳಿಮುಖನಾಗುತ್ತಿದ್ದ. ಜನ್ನುವಿನ ಗಮನಕ್ಕೆ ಅದು ಬರಲೇ ಇಲ್ಲ, ಆ ಹಾತೆಯೇ ಮೇಲೆಯೇ ದೃಷ್ಠಿ. ಹೇಗಾದರೂ ಅದನ್ನು ಹಿಡಿಯಬೇಕೆಂಬ ಛಲದಿಂದ ಅದರ ಹಿಂದೆ ಬಿದ್ದಿದ್ದ, ಆ ಹಾತೆಯಾದರೋ ಈ ಪುಟ್ಟನ ಕೈಗೆ ಸಿಕ್ಕಿತೇ, ಇಲ್ಲಿಂದ ಅಲ್ಲಿ, ಅಲ್ಲಿಂದ ಇಲ್ಲಿ ಜಿಗಿಯುತ್ತಾ ಅವನನ್ನು ಆಟವಾಡಿಸುತಿತ್ತು. ಸ್ವಲ್ಪ ದೂರ, ಸ್ವಲ್ಪ ಮುಂದೆ ಎಂದು ನಡೆದೇ ನಡೆದ. ಎಷ್ಟೋ ಹೊತ್ತಾದ ಮೇಲೆ ಆಚೆ ಇಚೆ ನೋಡಿದ ಜನ್ನು ಒಂದೇ ಸಲ ಗಾಬರಿಯಿಂದ ಹಾರಿಬಿದ್ದ. ನೋಡುತ್ತಾನೆ ಅವನು ಪೊರ್ಬುಗಳ ಮನೆಯ ಅಂಗಳದಲ್ಲಿದ್ದಾನೆ! ಅಪ್ಪ-ಅಜ್ಜಿ ಇಬ್ಬರೂ " ಅವರ ಮನೆಗೆ ಹೋದರೆ ಜಾಗ್ರತೆ " ಅಂತ ಕಟ್ಟಪ್ಪಣೆ ವಿಧಿಸಿದ್ದು ನೆನಪಾಗಿ ಹೆದರಿಕೆಯಾಗತೊಡಗಿತು.

ಇಲ್ಲಿಂದ ವಾಪಾಸು ಮನೆಗೆ ಪರಾರಿಯಾಗಬೇಕೆಂಬ ಆತುರದಲ್ಲಿ ಹಿಂದೆ ತಿರುಗಿದವನು ಯಾರಿಗೋ ಡಿಕ್ಕಿ ಹೊಡೆದು ಬಿದ್ದ!. ತಲೆಯೆತ್ತಿ ನೋಡಿದಾಗ ಕಂಡವಳು ಲವೀನಕ್ಕ. ಲವೀನಕ್ಕ ತುಂಬಾ ಚೆಂದ, ಬಿಳಿ ಬಣ್ಣ, ದೊಡ್ಡ ಕಪ್ಪು ಕಣ್ಣುಗಳು, ಉದ್ದದ ಜಡೆ ಎಲ್ಲಾ ಅಮ್ಮನ ಹಾಗೆ ಇದ್ದಾಳೆ. ಆದರೆ ಯಾಕೋ ಏನೋ ಹಣೆಗೆ ಅಮ್ಮ ಇಡ್ತಾರಲ್ಲ ಆ ಥರಾ ಉದ್ದ ನಾಮವಿಲ್ಲ. ಮೂಗಲ್ಲಿ ಅದೇನೋ ಇರುತ್ತಲ್ಲ, ಬಿಳಿ ಹೊಳೆಯುತ್ತಲ್ಲ ಅದೂ ಇಲ್ಲ ಅಂದುಕೊಂಡ ಒಳಗೊಳಗೆ. ಲವೀನಕ್ಕ " ಯಾಕೋ ಜನ್ನು, ಇವತ್ತು ನಮ್ಮನೆಗೆ ಬಂದು ಬಿಟ್ಟಿದ್ದೀಯಾ ?!" ಎಂದವಳೇ ಅವನನ್ನು ಎತ್ತಿ ಎರಡೂ ಕೆನ್ನೆಗಳ ತುಂಬಾ ಮುತ್ತಿಕ್ಕಿದಳು, ಆಯ್ತು ನಮ್ಮ ಜನ್ನುವಿಗೆ ಸಿಟ್ಟು, ನಾಚಿಕೆ  ಮತ್ತು ಅಳು ಎಲ್ಲಾ ಒಟ್ಟೊಟ್ಟಿಗೆ ಬಂತು. ’ ನಾನೇನು ಪಕ್ಕದ ಮನೆಯ ಗುಂಡು ಪಾಪುವೇ ? ನಾನು ದೊಡ್ಡ ಹುಡುಗ, ನಾನು ಶಾಲೆಗೆ ಹೋಗ್ತಾ ಇದ್ದೇನೆ, ಅಷ್ಟೂ ಗೊತ್ತಾಗಲ್ವಾ ಈ ಲವೀನಕ್ಕಗೆ ???’ " ಅಮ್ಮ ಮಾತ್ರ ಮುತ್ತು ಕೊಡೋದು ನಂಗೆ, ಬಿಡೀ ನನ್ನ, ಬಿಡೀ... "  ಅಂತ ಹೇಳುವಾಗಲೇ ಗಂಟಲು ಒತ್ತಿ ಬಂದ ಹಾಗೆ ಆಗಿ ದನಿ ತೆಗೆದು ಅಳಲಾರಂಭಿಸಿದ. ಜೊತೆಗೆ ಕೊಸರಾಡತೊಡಗಿದ. ಲವೀನಕ್ಕ ಬಿಡಲೇ ಇಲ್ಲ, ಅವನನ್ನೆತ್ತಿಕೊಂಡೇ ಮನೆಯೊಳಗೆ ನಡೆದಳು. ಜನ್ನು ಕೊಸರಾಡುವದನ್ನೂ, ಅಳುವುದನ್ನು ಮರೆತು ಬೆರಗಾಗಿ ಅವರ ಮನೆಯನ್ನು ನೋಡಲಾರಂಭಿಸಿದ. ’ ನಮ್ಮ ಮನೆ ಥರಾ ಇಲ್ಲವೇ ಇಲ್ಲ ಇವರ ಮನೆ, ಎದುರಿಗೆ ಏನೋ ದೊಡ್ಡ ಚಿತ್ರ ಹಾಕಿದ್ದಾರೆ. ಒಬ್ಬ ಮಾಮನನ್ನು ಕಟ್ಟಿಗೆ ತುಂಡೆರಡಕ್ಕೆ ನೇತು ಹಾಕಿ ಮೊಳೆ ಬೇರೆ ಹೊಡೆದಿದ್ದಾರೆ. ಕೈ ಕಾಲುಗಳಿಂದ ಕೆಂಪು ಬಣ್ಣದ ರಕ್ತ ಬೇರೆ ಸುರಿಯುತ್ತಿದೆ, ಅವನಿಗೆ ಎಷ್ಟು ನೋವಾಗುತ್ತಿರಬೇಕು’ ಅಂದುಕೊಂಡದ್ದೇ ತಡ ನಮ್ಮ ಮೃದು ಹೃದಯಿ ಪುಟಾಣಿಗೆ ಜೋರು ಅಳು ಬಂತು, " ಲವೀನಕ್ಕ, ಆ ಮಾಮಂಗೆ ಯಾರು ಹಾಗೆ ಮಾಡಿದ್ದು, ಯಾಕೆ ಮಾಡಿದ್ದು, ಪಾಪ ಅಲ್ವಾ ?..." ಅಂತ ಅಳುತ್ತಾ ಕೇಳಿದ. ಲವೀನಕ್ಕ ಮೆಲ್ಲಗೆ ನಕ್ಕು ಏನೂ ಉತ್ತರಿಸದೆ ಅವನನ್ನು ಉದ್ದದ ಮೆತ್ತಗಿನ ಆದರೆ ಹಿಂದೆ ಒರಗಲು ಇದ್ದ ಮಂಚದ ಥರಹಾ ಇದ್ದ ಎಂಥಹುದೋ ಮೇಲೆ ಕೂರಿಸಿದಳು. ಕಣ್ಣ ತುಂಬಾ ನೀರು ತುಂಬಿದ್ದ ಜನ್ನು ಚಿತ್ರದಲ್ಲಿದ್ದ ಮಾಮನ ಬಗ್ಗೆ ಮರೆತು ತಾನು ಕೂತ ವಸ್ತುವಿನ ಕಡೆ ಗಮನ ಹರಿಸಿದ. ಅದು ಅಮ್ಮನ ತೊಡೆಯಲ್ಲಿ ಕೂತಂತೆ ಇತ್ತು, ಒಂದು ಸಲ  ಕೂತಲ್ಲೇ ಜಿಗಿಯೋಣ ಅನಿಸಿತು, ಜಿಗಿದ. ಖುಷಿ ಅನಿಸಿತು, ಮತ್ತೊಮ್ಮೆ ಜಿಗಿದ, ಮಗದೊಮ್ಮೆ.....ಜಿಗಿಯುತ್ತಲೇ ಇದ್ದ. ನಮ್ಮ ಜನ್ನುವಿಗೆ ಖುಷಿಯೋ ಖುಷಿ, ತಡೆಯಲಾರದಷ್ಟು ನಗು ಬೇರೆ! ನಕ್ಕು ನಕ್ಕು ಸುಸ್ತಾಗಿ ಕೊನೆಗೊಮ್ಮೆ ಅಲ್ಲೇ ಮಲಗಿದ, ಲವೀನಕ್ಕನ ಮುಖ ನೋಡುತ್ತಾನೆ, ಅವಳೋ ಕಣ್ಣು ಮುಚ್ಚುವುದನ್ನೂ ಮರೆತು ಇವನನ್ನೇ ನೋಡುತ್ತಿದ್ದಾಳೆ. ’ ಓ! ಲವೀನಕ್ಕಾಗೆ ಸಿಟ್ಟು ಬಂದಿದೋ ಏನೋ ’ ಅನಿಸಿ  ಎದ್ದು ಸುಮ್ಮಗೆ ಕೂತ. ಒಂದು ನಿಮಿಷ ಅಷ್ಟೇ! ಅವನ ಗಮನ ಅಲ್ಲಿದ್ದ ಪುಟಾಣಿ ಮೇಜಿನ ಮೇಲೆ ಹರಿಯಿತು. ಅದರ ಮೇಲೆ ಬಿಳಿಯ ಹೊದಿಕೆ,ಅದೆಷ್ಟು ಚೆಂದವಿತ್ತೆಂದರೆ ಜನ್ನು ಕೂತಲ್ಲಿಂದ ಓಡಿ ಅದರ ಹತ್ತಿರ ಹೋಗಿ ತನ್ನ ಪುಟ್ಟ ಕೈಗಳಲ್ಲಿ ಅದನ್ನು ಮೃದುವಾಗಿ ಮುಟ್ಟಿದ, ಅದು ಅವನ ಅಮ್ಮನ ಕೂದಲಿನ ಹಾಗೆ ಮೆತ್ತ ಮೆತ್ತಗಿತ್ತು. ಬಿಳಿ ಬಿಳಿ ಬಟ್ಟೆಯಲ್ಲಿ ತೂತಿನ ಚೆಂದದ ಚಿತ್ತಾರವಿತ್ತು. ಅದರ ಮೇಲೊಂದು ಸಣ್ಣ ಆದರೆ ಚೆಂದ ಅಂದರೆ ಭಯಂಕರ ಚೆಂದದ ಗಾಜಿನ ಹಾಗೆ ಹೊಳೆಯುವ ಬೊಂಬೆ. ಅದೊಂದು ಹುಡುಗಿ ಬೊಂಬೆ, ಗುಂಡು ಪಾಪು ಹಾಗೆ ನಗು ಅದರದ್ದು, ಇನ್ನೇನು ಅದನ್ನು ಮುಟ್ಟಬೇಕು ನಮ್ಮ ಜನ್ನು ಅಷ್ಟರಲ್ಲೇ ಸಾಂತಯ್ಯ ಪೊರ್ಬುಗಳು " ಲವೀನಾ, ಬೇಬಿ...." ಅಂತ ಕರೆಯುತ್ತಾ ಒಳ ಬಂದರು. ಮೊದಲವರ ಕಣ್ಣಿಗೆ ಬಿದ್ದದ್ದು ದೊಡ್ಡ ಕಣ್ಣಿನ ಬೆರಗಾಗಿ ಅವರನ್ನು ನೊಡುತ್ತಿರುವ ಜನ್ನು!

" ಅರೇ ಪುಟ್ಟಣ್ಣ, ಅದೇನೋ ಇವತ್ತು ನಮ್ಮನೆಗೆ ಬಂದಿದ್ದು? ಅಮ್ಮ ಹತ್ತಿರ ಹೇಳಿ ಬಂದಿದ್ದೀಯಾ ?, ಲವೀನಾ ?? " ಎಂದು ಅವಳ ಕಡೆ ತಿರುಗಿದವರು ಒಂದರೆಗಳಿಗೆ ಕಲ್ಲಾದರು. ಅವಳು ಜನ್ನುವನ್ನು ನೋಡುತ್ತಿರುವ ಪರಿ, ಧಾರಾಕಾರವಾಗಿ ಸುರಿಯುತ್ತಿದ್ದ ಕಣ್ಣೀರ ಕಂಡು ಅವಳ ಪರಿಸ್ಥಿತಿ ಅರ್ಥವಾಗಿ ಹೊಟ್ಟೆಯಲ್ಲಿ ವಿಚಿತ್ರ ಸಂಕಟವಾದಂತಾಯಿತು. ಅವಳ ಕಡೆ ನಡೆದು ತಲೆ ನೇವರಿಸಿ, "ಲವೀನಾ, ಬೇಬಿ... ಇವತ್ತು ಮಾರ್ಕೇಟ್ ಅಲ್ಲಿ ಇಷ್ಟೇ  ಬಂಗುಡೆ ಮೀನು ಸಿಕ್ಕಿದ್ದು, ಏಳಮ್ಮಾ, ಏಳು....ಮಗು ಮುಂದೆ ಅತ್ತರೆ ಅವಂಗೆ ಗಾಬರಿ ಆಗ್ತದಲ್ಲಾ ಮಗಳೇ ? " ಎಂದು ಅವಳ ಗಮನ ಬೇರೆಡೆ ಹರಿಸಲು ಪ್ರಯತ್ನ ಮಾಡಿದರು. ಊಹೂಂ, ಲವೀನಾ ಮಿಸುಕಾಡಲಿಲ್ಲ...ಸಾಂತಯ್ಯನವರು ಬಿಟ್ಟ ಕಣ್ಣುಗಳಿಂದ ಅವರನ್ನು ನೋಡುತ್ತಿದ್ದ ಜನ್ನುವನ್ನು " ಬಾ ಮರಿ, ಹಣ್ಣು ತಿಂತೀಯಾ ? ನಿಂಗೆ ಯಾವ ಹಣ್ಣು ಇಷ್ಟವೋ ?" ಅಂತ ಕೇಳುತ್ತಾ ಎತ್ತಿ ಒಳಗೆ ಕರಕೊಂಡು ಹೋದರು. ಜನ್ನುವೋ ಮೊದಲು ಅವರ ಎತ್ತರ-ಗಾತ್ರ ನೋಡಿ ಹೆದರಿ ಆಮೇಲೆ ಮೀನ ವಾಸನೆಗೆ ಮುಖ ಸಿಂಡರಿಸಿದವನು, ಅವರ ಮೃದು ಮಾತುಗಳಿಗೆ ಸೋತುಬಿಟ್ಟ. ಯಾವತ್ತೂ ಅಜ್ಜಿಯ ಮುಸುರೆ, ಮಡಿ, ಮೈಲಿಗೆಗಳಿಗೆ ಸಿಲುಕಿದವನು ಅಮ್ಮಮ್ಮ ಮನೆಯ ಅಜ್ಜನನ್ನು ತುಂಬಾ ಪ್ರೀತಿಸುತ್ತಿದ್ದ. ಆದರೆ ಅಲ್ಲಿಗೆ ಅಮ್ಮ ಕರಕೊಂಡು ಹೋಗುತ್ತಿದ್ದದ್ದೇ ಕಡಿಮೆ. ’ ಈ ಅಜ್ಜ ಎಷ್ಟು ಚಂದ ಇದ್ದಾರೆ, ಅಮ್ಮಮ್ಮ ಮನೆ ಅಜ್ಜ ಥರಾ, ಚೆಂದ ಮಾತಾಡ್ತಾರೆ, ಅಲ್ಲದೆ ನಂಗಿಷ್ಟದ ಹಣ್ಣೂ ಕೊಡ್ತಾರೆ ಅಂತೆ! ’  ನಮ್ಮ ಪುಟ್ಟ ಜನ್ನು ಅವರ ಕೊರಳ ಸುತ್ತ ಕೈ ಬಳಸಿದ! ಅಪ್ಪ-ಅಜ್ಜಿ ಬಿಡಿ, ಅಮ್ಮನ ನೆನಪೂ ಹಾರಿ ಹೋಯ್ತು ಈ ಚೆಂದದ ಅಜ್ಜನ ಅಕ್ಕರೆಯಲ್ಲಿ! " ಅಜ್ಜಾ! ಇದು ನಿಮ್ಮದೇ ಮನೆಯಾ? ಯಾರೆಲ್ಲಾ ಇದ್ದಾರೆ ಇಲ್ಲಿ?  ಶಣ್ಣ ಬಾಬು ಉಂಟಾ ನಿಮ್ಮನೇಲಿ ? ನಾಯಿ ಉಂಟಾ? ಬೆಕ್ಕು ಉಂಟಾ?, ತಿಮ್ಮು ಮನೇಲಿ ರಾಜು ನಾಯಿ  ಇದ್ದಾನೆ, ಅಂವ ನಂಗೆ ಎಂಥದ್ದೂ ಮಾಡಲ್ಲ ಗೊತ್ತಾ ? " ಎಂದೆಲ್ಲಾ ಪ್ರಶ್ನೆಗಳ ಮಳೆ ಸುರಿಸಿದ. ಅಜ್ಜ ನಗುತ್ತಾ ನಿಧಾನವಾಗಿ ಅವನನ್ನೊಮ್ಮೆ ಮೇಲಕ್ಕೆತ್ತಿ ಎಸೆದು ಮತ್ತೆ ಹಿಡಿದು ಅವನನ್ನು ನಗಿಸಿದರು,  ಅವನ ಕೆನ್ನೆಯನ್ನೊಮ್ಮೆ ಮೃದುವಾಗಿ ಹಿಂಡಿ, " ಹೌದು ಪುಟ್ಟ, ನಮ್ಮದೇ ಮನೆ, ನೀನು ಇಲ್ಲೇ ಇರ್ತೀಯಾ ?ನಮ್ಮ ಮನೇಲಿ ನಿನ್ನ ಥರಾ ಸಣ್ಣ ಬಾಬು ಯಾರೂ ಇಲ್ಲ ಮಾರಾಯ, ನೀನಿದ್ದರೆ ನಾಯಿ, ಬೆಕ್ಕು ಎಲ್ಲಾ ತರುವಾ ಆಯ್ತಾ ?" ಎಂದು ಅವನಿಗುತ್ತರಿಸಿ ಅಲ್ಲೇ ಒಳಮನೆಯಲ್ಲಿದ್ದ ಬುಟ್ಟಿಯಲ್ಲಿದ್ದ ಕಿತ್ತಳೆ ಮತ್ತು ಬಾಳೆಹಣ್ಣು ಕೊಟ್ಟು ಅವನ ಪುಟ್ಟ ಕೈ ತುಂಬಿದರು. ಜನ್ನು ಪೂರ್ತಿ ಖುಷಿಯಾದ!  ’ ನನ್ನ ಅಮ್ಮ ಇದ್ದಾಳಲ್ಲಾ, ಯಾವಾಗಲೂ ೨ ಸೋಳೆ ಕಿತ್ತಳೆ ಹಣ್ಣು ಕೊಡುತ್ತಾಳೆ, ಇನ್ನೂ ಕೇಳಿದರೆ, ಶೀತ ಕಂದಾ, ಬೇಡಮ್ಮ ಸಾಕು ಅಂತಾಳೆ...ಇವತ್ತು ಇಡೀ ಹಣ್ಣು ನಂಗೆ! ಈ ಅಜ್ಜ ಎಷ್ಟು ಒಳ್ಳೆಯವರು’ ಅನಿಸಿ ಬಾಗಿ ಅಜ್ಜನ ಮುಖಕ್ಕೆ ಮುತ್ತು ಕೊಟ್ಟ. ’ ಬಾಳೆಹಣ್ಣು ಮನೆಯಲ್ಲಿ ಯಾವತ್ತೂ ಇರುತ್ತೆ, ಬೇಕಾದ್ರೆ ತೋಟಕ್ಕೆ ಹೋದ್ರೂ ಸಿಗುತ್ತೆ ’ ಅಂತ ಯೋಚಿಸಿ ಕೈಯಲ್ಲಿದ್ದ ಕಿತ್ತಳೆ ಮುಂದೆ ಬಾಳೆಹಣ್ಣು ಸಾಮಾನ್ಯ ಅನಿಸಿ ಅದನ್ನು ಧಾರಾಳವಾಗಿ ವಾಪಾಸು ನೀಡಿದ.
ಅಜ್ಜ ಅದನ್ನು ಎತ್ತಿಟ್ಟು ಅವನನ್ನು ಅಡುಗೆ ಮನೆಗೆ ಹೊತ್ತೊಯ್ದರು, ಅಲ್ಲಿದ್ದ ಡಬ್ಬಗಳಲ್ಲಿ ತಡಕಾಡಿ ಗೇರು ಬೀಜ, ದ್ರಾಕ್ಷಿ ಮತ್ತೊಂದು ಮೈ ಬಣ್ಣದ ವಸ್ತು ಎಲ್ಲವನ್ನು ಒಂದು ಪುಟ್ಟ ತಟ್ಟೆಗೆ ಹಾಕಿ ಅವನ ಕೈಗೆ ಕೊಟ್ಟು ಅವರು ಕೆಳಗೆ ಕೂತು ಅವನನ್ನು ತೊಡೆ ಮೇಲೆ ಕೂಡಿಸಿದರು. ಜನ್ನು ಅಷ್ಟರವರೆಗೆ ಆ ವಿಚಿತ್ರ ವಸ್ತುವನ್ನು ತಿಂದೇ ಇರಲಿಲ್ಲ, ಅದನ್ನೆತ್ತಿ ಪರಿಶೀಲಿಸಿದ, ಏನೋ ಬೀಜದ ತರಹ ಇತ್ತು. ಪಾಪ ಗೊತ್ತಾಗಲಿಲ್ಲ! ಕುತೂಹಲ ತಡೆಯಲಾಗದೆ ಮುಖ ಮೇಲೆತ್ತಿ ಅಜ್ಜನನ್ನ ಕೇಳಿಯೇ ಬಿಟ್ಟ " ಅಜ್ಜಾ, ಎಂಥ ಇದು, ತಿನ್ನಲ್ಲಿಕ್ಕಾ ? ಎಲ್ಲಿಂದ ತಂದಿರಿ ? " ಅಂತ! " ಅದಾ ಪುಟ್ಟ! ಅದಕ್ಕೆ ಬಾದಾಮಿ ಅಂತಾರೆ, ಅದು ತಿಂದರೆ ನೀನು ತುಂಬಾ ಗಟ್ಟಿಯಾಗುತ್ತೀ, ಅದು ಹೊರದೇಶದಿಂದ ತಂದದ್ದು " ಎಂದರು ನಗುತ್ತಾ! ಇವನ ಮಾತು ಕಥೆ ನೋಡಿ ಅವರಿಗೆ ಏನೋ ಖುಷಿಯಾಗುತಿತ್ತು, ಅಷ್ಟು ಮುದ್ದು ಹುಡುಗ ಜನ್ನು. ಅಷ್ಟರಲ್ಲಿ ಲವೀನಾ ಒಳ ಬಂದಳು, ಜನ್ನು ಖುಷಿಯಿಂದ ನಗ ಹೊರಟವನು ಅವಳ ಅಳು, ಕೆಂಪಗೆ ಊದಿದ  ಮುಖ ಕಂಡು ಗಾಬರಿಯಾದ. "ಲವೀನಾ, ತಾಯಿ ಅಳಬೇಡಮ್ಮಾ...." ಎಂದ ಸಾಂತಯ್ಯ ಪೊರ್ಬುಗಳ ಸ್ವರವೂ ಒದ್ದೆಯಾಗಿತ್ತು. ಅವಳು ತಂದೆಯ ಪಕ್ಕಕ್ಕೆ ಕುಸಿದು ಕುಳಿತವಳು ಕೇಳುವವರ ಮನ ಕರಗುವಂತೆ ದನಿ ತೆಗೆದು ಅಳಲಾರಂಭಿಸಿದಳು. ಅದರೊಂದಿಗೆ ಜನ್ನು ಹಿಮ್ಮೇಳ ಬೇರೆ.

ಅಷ್ಟರಲ್ಲೇ ಹೊರಗಿಂದ ಏನೋ ಸದ್ದಾಂತಾಯಿತು, ಅಳುತ್ತಿದ್ದ ಲವೀನಾಗಾಗಲೀ, ಜನ್ನುವಿಗಾಗಲೀ ಅದರ ಪರಿವೇ ಇರಲಿಲ್ಲ. ಪೊರ್ಬುಗಳು ಅವನನ್ನು ಕೆಳಗೆ ಕೂಡಿಸಿ ಹೊರ ಧಾವಿಸಿದರು, ಅಲ್ಲಿ ನೋಡುತ್ತಾರೆ, ಹೊರ ಬಾಗಿಲ ಬಳಿ ಜನ್ನು ಅಮ್ಮ ಭಾಗೀರಥಿ ಏದುಸಿರು ಬಿಡುತ್ತಾ ಅಸ್ತವ್ಯಸ್ತ ಸೀರೆ, ಕೆದರಿದ ಕೂದಲೊಂದಿಗೆ ನಿಂತಿದ್ದಾಳೆ. ಇವರನ್ನ ನೋಡಿದವಳೇ " ಸಂಜೆಯಿಂದ ನನ್ನ ಮಗು ಕಾಣುತ್ತಿಲ್ಲ ಪೊರ್ಬುಗಳೇ,  ನೀವೇನಾದ್ರೂ ನೋಡಿದ್ರಾ ?, ಅವರಪ್ಪ ಎಲ್ಲಾ ಕಡೆ ಹುಡುಕಿಸಿದ್ರು, ಆ ಕೊರಗರ ಹಟ್ಟಿಯ ತಿಮ್ಮುವನ್ನೂ ಕೇಳಾಯ್ತು, ಅಲ್ಲೂ ಇಲ್ಲವಂತೆ, ನಂಗೆ ಕೈ-ಕಾಲು ಆಡ್ತಾನೇ ಇಲ್ಲ " ಅಂತ ಉಸಿರಾಡಲೂ ಪುರುಸೊತ್ತಿಲ್ಲದಂತೆ ಬಡ ಬಡ ಉಸುರಿ ಗೋಳೋ ಅಂತ ಅತ್ತಳು. ಅವಳ ಅಳುವಿನ ಸದ್ದು ಮಗರಾಯನ ಕಿವಿ ತಲುಪಿತು, ’ಹೇ, ಇದು ನನ್ನ ಅಮ್ಮ ಅಲ್ವಾ ?’ ಅಂದುಕೊಂಡ ಜನ್ನು ಕೈಲ್ಲಿದ್ದ ಹಣ್ಣು, ತಟ್ಟೆ ಎಲ್ಲಾ ಬಿಟ್ಟು ಹೊರಗೋಡಿ ಬಂದ, ಅವನ ಮುಖದಲ್ಲೀಗ ಸೂರ್ಯನ ಪ್ರಕಾಶದಂತೆ ನಗು. ಮಕ್ಕಳೇ ಹಾಗೆ ಅಲ್ಲವೇ ? ಬಿಸಿಲು-ಮಳೆಯ ಥರಾ ಅವರ ನಗು-ಅಳು! ಅಮ್ಮನ ಬಳಿ ಅಂವ ಹೋದನೋ, ಅಮ್ಮ ಅವನನ್ನು ಎಳಕೊಂಡಳೋ ಗೊತ್ತಿಲ್ಲ ಒಟ್ಟು ಅಮ್ಮನ ಅಪ್ಪುಗೆಯಲ್ಲಿದ್ದ! ಭಾಗೀರಥಿ ಅವನನ್ನು ಅಪ್ಪಿ ಮುದ್ದಾಡಿದ್ದೇ ಮುದ್ದಾಡಿದ್ದು! ಅವಳ ಉದ್ವೇಗ ಇಳಿಯುವವರೆಗೆ ಕಾದಿದ್ದ ಪೊರ್ಬುಗಳು " ಭಾಗೀರಥಿ, ಎಲ್ಲಿ ಹೋಗ್ತಾನೆ ಇಷ್ಟು ಸಣ್ಣ ಪೋರ, ಈ ಥರಾ ಗಾಬ್ರಿ ಆದ್ರೆ ಹೇಗಮ್ಮಾ? ನಮ್ಮನೆಗೆ ಬಂದಿದ್ದ, ಸ್ವಲ್ಪ ಹೊತ್ತಲ್ಲೇ ತಂದು ಬಿಡ್ತಾ ಇದ್ದೆ! " ಅಂದರು. ಅಮ್ಮ-ಮಗನನ್ನ ನೋಡಿ ಅವರಿಗೂ ಕಣ್ಣು ತುಂಬಿ ಬಂದಿತ್ತು. ಜನ್ನುವಿಗೋ ಹೆದರಿಕೆಯೋ ಹೆದರಿಕೆ, ಅಮ್ಮ ಈ ನಮೂನೆ ಅತ್ತದ್ದು ನೋಡಿ,  ಅಜ್ಜ ಬೇರೆ ಅಳೋ ಥರಾ ಇದ್ದಾರೆ. ಬಂದಾಗಿಂದ ಈ ಲವೀನಕ್ಕ ಬೇರೆ ಒಳಗೆ ಅಳ್ತಾ ಕೂತಿದ್ದಾಳೆ, ಏನಾಗುತ್ತಿದೆಯೆಂದೇ ಅರಿಯದಾದ ಪುಟ್ಟ ಜನ್ನು. ಮರುಜೀವ ಪಡೆದಂತಾದ ಭಾಗೀರಥಿ ಅವನನ್ನೆತ್ತಿ ಹೊರಡಲನುವಾಗುತ್ತಾ " ಪೊರ್ಬುಗಳೇ, ಬರ್ತೇನೆ, ತಂಟೆ ಪೋಕರಿ ಇವ, ನಿಮಗೆ ಉಪದ್ರ ಕೊಟ್ನಾ ಹೇಗೆ ?" ಎಂದು ಕೇಳುವಷ್ಟರಲ್ಲಿ ಬಾಗಿಲ ಚೌಕಟ್ಟಿನ ಬಳಿ ನಿಂತ ಲವೀನಾ ಕಣ್ಣಿಗೆ ಬಿದ್ದಳು. ಅವಳೋ ಅಮ್ಮ-ಮಗನ ಮುದ್ದಾಟವನ್ನು ನೋಡುತ್ತಾ ನಿಂತವಳು. ಅವಳ ಅಳೂ ತಹಬಂದಿಗೆ ಬಂದಿತ್ತು. ಭಾಗೀರಥಿಯ ದೃಷ್ಟಿ ಲವೀನಾ ಮೇಲೆ ಬಿದ್ದೊಡನೆ ಅವಳ ಊದಿಕೊಂಡ ಮುಖ ನೋಡಿ ಮನ ಚುರ್ ಎಂದಿತು. " ಲವೀನಾ, ನಿಂಗೆ ಇವನನ್ನು ನೋಡಬೇಕೆನಿಸಿದಾಗೆಲ್ಲಾ ಬಾ ಮನೆಗೆ....,ಮುಗಿದು ಹೋದದ್ದ ಮರೆಯಬೇಕೇ ಹುಡುಗಿ, ಮತ್ತಷ್ಟು ಕೊರಗೋದಲ್ಲ.  ನಿಂಗೆ ಹೇಗೆ ಅನಿಸುತ್ತೆ ಅನ್ನೋದು ಇವತ್ತು ನಂಗೆ ಸರಿಯಾಗಿಯೇ ತಿಳಿಯಿತು ಮಾರಾಯ್ತಿ, ನಾನು ಅತ್ತೆಗೆ ಹೇಳ್ತೇನೆ, ಮನೆಗೆ ಆವಾಗಾವಗ ಬರ್ತಾ ಇರು.ಜನ್ನು ಕೂಡಾ ನಿನ್ನ ಮಗನೇ ಅರ್ಥವಾಯ್ತಾ ?  ಕಂದಮ್ಮಾ, ಅಕ್ಕಂಗೆ ಟಾಟಾ ಹೇಳು " ಅಂದವಳೇ ಜನ್ನುವಿನಿಂದ ಅವಳಿಗೆ ಕೈಯಾಡಿಸಿ ಅಲ್ಲಿಂದ ಹೊರಟೇಬಿಟ್ಟಳು.
ಜನ್ನು ಅವರಮ್ಮನನ್ನು ಮೊದಲ ಬಾರಿಗೆ ಧಿಕ್ಕರಿಸಿ ಅಮ್ಮನ ಸೊಂಟದಿಂದ ಇಳಿದು ಲವೀನಕ್ಕ ಹತ್ತಿರ ಓಡಿ ಬಂದು ಅವಳ ಕೈ ಹಿಡಿದೆಳೆದು ಮುಖದ ಹತ್ತಿರ ಮುಖವಿಟ್ಟು ಅವಳಿಗಷ್ಟೇ ಕೇಳುವಂತೆ ಉಸುರಿದ " ಲವೀನಕ್ಕ, ನಿಮ್ಮನೇಲಿ ನಾಯಿ, ಬೆಕ್ಕು, ಬಾಬು ಯಾವುದೂ ಇಲ್ಲ ಅಲ್ವಾ ಆಟ ಆಡ್ಲಿಕ್ಕೆ?  ನಾಳೆ ಕೆರೆ ದಂಡೆಗೆ ಬಾ ಆಯ್ತಾ, ಅಲ್ಲಿ ನಾನು ತಿಮ್ಮು ಇರ್ತೇವೆ, ನಿಂಗೆ ಪೇರಳೆ, ಕುಂಟಾಳ ಹಣ್ಣು ಮತ್ತೆ ತುಂಬಾ ಗೇರುಬೀಜ ಎಲ್ಲಾ ಕೊಡ್ತೇವೆ, ನಮ್ಮೊಟ್ಟಿಗೆ ಆಟ ಆಡು ಆಯ್ತಾ, " ಅಂದವನೇ ಅವಳ ಕೆನ್ನೆಗೆ ಮುತ್ತೊಂದನ್ನು ಕೊಟ್ಟ, ಲವೀನಕ್ಕ ನಕ್ಕಳು, ಕಿತ್ತಳೆ, ಬಾದಾಮಿಗಿಂತ ಲವೀನಕ್ಕನ ನಗುವೇ ಹೆಚ್ಚು ಇಷ್ಟ ಅನಿಸಿತು ಜನ್ನುವಿಗೆ.  ಅಜ್ಜನನ್ನ ನೋಡಿ ನಕ್ಕು ಅಮ್ಮನ ಕಡೆ ಓಡಿದ. ಅಮ್ಮ, ಅಜ್ಜ ಬೆರಗಾಗಿ ನೋಡುತ್ತಲೇ ಇದ್ದರು.
================================================================


No comments:

Post a Comment